ಲ್ಯೂಕಸ್, ಎಡ್‍ವರ್ಡ್ ವೆರಾಲ್
1868-1938. ಇಂಗ್ಲಿಷ್ ಪ್ರಬಂಧಕಾರ ಮತ್ತು ವಿಮರ್ಶಕ. ಲಂಡನ್ ವಿಶ್ವವಿದ್ಯಾಲಯದಲ್ಲಿ ಓದಿದ. ಸ್ವಲ್ಪಕಾಲ ಪಂಚ್ ಪತ್ರಿಕೆಯ ಉಪಸಂಪಾದಕನಾಗಿದ್ದ. ಕಲೆ, ಸಾಹಿತ್ಯ, ಪ್ರವಾಸ - ಹೀಗೆ ನಾನಾ ವಿಷಯಗಳ ಮೇಲೆ ವಿಪುಲವಾದ ಬರೆವಣಿಗೆ ಮಾಡಿದ್ದಾನೆ. ಇವನ ಬರೆಹಗಳಲ್ಲಿ ಜೀವನ ಚರಿತ್ರೆ, ಪ್ರಬಂಧಗಳು ಮತ್ತು ಸಂಭ್ರಮದ ಕಥೆಗಳು ಸೇರುತ್ತವೆ. ಇವನ ಲಲಿತ ಪ್ರಬಂಧಗಳು ಬಲು ಆಕರ್ಷಕವಾಗಿವೆ. ಮೂವತ್ತು ಸಂಗ್ರಹಗಳಲ್ಲಿ ಗುಡ್‍ಕಂಪನಿ (1909), ಓಲ್ಡ್ ಲ್ಯಾಂಪ್ಸ್ ಫಾರ್ ನ್ಯೂ (1913), ಎನ್‍ಕೌಂಟರ್ಸ್ ಆ್ಯಂಡ್ ಡೈವರ್‍ಷನ್ಸ್ (1924)-ಇವು ಕೆಲವು.  ಚಾಲ್ರ್ಸ್ ಲ್ಯಾಂಬ್ (1935) ಕುರಿತ ಜೀವನಚರಿತ್ರೆಯೊಂದನ್ನು ಬರೆದಿದ್ದಾನೆ. ಲಲಿತವಾದ ಓಟ, ತಿಳಿ ಹಾಸ್ಯ ಇವನ ಕೃತಿಗಳನ್ನು ಜನಪ್ರಿಯವನ್ನಾಗಿ ಮಾಡಿವೆ. ಚಾಲ್ರ್ಸ್ ಮತ್ತು ಮೇರಿ ಲ್ಯಾಂಬ್ ಅವರ ಕೃತಿಗಳನ್ನು ಹಾಗೂ ಪತ್ರಗಳನ್ನು ಈತ ಸಂಪಾದಿಸಿದ್ದಾನೆ (1903-35). ಇವನು ತನ್ನ ಬಹುತೇಕ ಜ್ಞಾನವನ್ನು ಸಂಪಾದಿಸಿಕೊಂಡದ್ದು ಬ್ರೈಟನ್‍ನ ಪುಸ್ತಕದಂಗಡಿಯಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ. ಹಾಗಾಗಿ ಇವನು ಬರೆದ ಆತ್ಮಚರಿತ್ರಾತ್ಮಕ ಗ್ರಂಥವಾದ ರೀಡಿಂಗ್, ರೈಟಿಂಗ್ ಅಂಡ್ ರಿಮೆಂಬರಿಂಗ್ (1932) ಪುಸ್ತಕಪ್ರಪಂಚದ ವೈಶಿಷ್ಟ್ಯವನ್ನು ಪರಿಚಯಿಸುತ್ತದೆ.
	(ಎಲ್.ಎಸ್.ಎಸ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ